
3rd April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಎ.2-ಕರ್ತವ್ಯದಲ್ಲಿ ನಿಷ್ಠೆ, ಶಿಸ್ತು, ಮತ್ತು ಶ್ರದ್ಧೆಯನ್ನು ಅಳವಡಿಸಿಕೊಂಡರೆ ಎಲ್ಲ ಕಾರ್ಯಗಳೂ ಸುಗಮಗೊಳ್ಳುತ್ತವೆ ಎಂದು ನಿವೃತ್ತ ಎಎಸ್ಐ ಡಿ.ಸಿ.ಗುಡ್ಡಳ್ಳಿ ಹೇಳಿದರು.
ನವನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಒಂದು ವಿಶ್ವವಿದ್ಯಾಲಯವಿದ್ದಂತೆ, ಈ ಸಂಸ್ಥೆಯಲ್ಲಿಯೂ ಅನೇಕ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಯಾವುದೇ ತೊಂದರೆ ಉಂಟಾಗದAತೆ ನೋಡಿಕೊಳ್ಳುವುದು, ರಕ್ಷಣೆ ಒದಗಿಸುವುದು ಹಾಗೂ ಘಟನೆಯ ಸತ್ಯಾಸತ್ಯತೆಯನ್ನು ಪತ್ತೆ ಮಾಡುವುದು ಪೊಲೀಸರ ಮುಖ್ಯ ಕರ್ತವ್ಯಗಳಾಗಿವೆ ಎಂದರು.
ಜಿಲ್ಲೆಯಲ್ಲಿ ಪೋಲಿಸ್ ಸಿಬ್ಬಂದಿಗಳ ಕೊರತೆಯಿದ್ದರೂ ಅಧಿಕಾರಿಗಳು ನಿರಂತರವಾಗಿ ಶ್ರಮಿಸಿ ಶಿಷ್ಟಾಚಾರವನ್ನು ಕಾಪಾಡಬೇಕು. ಜೊತೆಗೆ ಬಾಗಲಕೋಟೆ ಜಿಲ್ಲೆಗೆ ಹೊರಗಿನಿಂದ ಬಂದ ಅಧಿಕಾರಿಗಳಿಗೆ ಸೂಕ್ತ ವಾಸ್ತವ ವ್ಯವಸ್ಥೆ ಮಾಡಬೇಕು. ನಿವೃತ್ತ ಪೊಲೀಸರಿಗಾಗಿ ಸಭಾಭವನ ನಿರ್ಮಾಣ, ಅವರ ವೈದ್ಯಕೀಯ ವೆಚ್ಚವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸುವುದು, ಅವರ ಕುಟುಂಬಗಳಿಗೆ ಶೈಕ್ಷಣಿಕ ಸಹಾಯ ಒದಗಿಸುವುದು ಅಗತ್ಯವಾಗಿದೆ ಎಂದು ಗುಡ್ಡಳ್ಳಿ ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ವರದಿ ವಾಚಿಸಿ ಮಾತನಾಡಿ, ಪೋಲೀಸ್ ಇಲಾಖೆಯ ವೈದ್ಯಕೀಯ ಸಹಾಯ, ಶಿಕ್ಷಣ, ಕರ್ತವ್ಯದಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ಆರ್ಥಿಕ ನೆರವು, ಪೊಲೀಸ್ ಸಮುದಾಯ ಭವನ ನಿರ್ಮಾಣ ಹಾಗೂ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖಾಲಿ ಇರುವ ಪೊಲೀಸ್ ಇಲಾಖೆಯ ಪ್ರದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ 17 ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಪರೇಡ್ ಕಮಾಂಡರ್ ಸದಾಶಿವ ವನಜಂಕರ ನೇತೃತ್ವದಲ್ಲಿ ಆರು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ ಒಂದು ಮಹಿಳಾ ತಂಡವೂ ಸೇರಿತ್ತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ಬಸವಂತರಾಯ ದೇಸಾಯಿ ಸೇರಿ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ